ದ್ರೌಪದಿ ಐವರನ್ನು ಮದುವೆಯಾದದ್ದು..!

 


ದ್ರೌಪದಿ ಅಗ್ನಿಕುಂಡದಲ್ಲಿ ಹುಟ್ಟಿದ ಹೆಣ್ಣು. ಅದರಲ್ಲಿಯೂ ತಂದೆಯ ಅಪಮಾನದ ಸೇಡಿನ ಜ್ವಾಲೆಯ ಹಿನ್ನೆಲೆಯಲ್ಲಿ ಹುಟ್ಟಿ ಬಂದವಳು. ಯುವತಿಯಾಗಿಯೇ ಹುಟ್ಟಿ ಬಂದದ್ದರಿಂದ ಮಾನವರೆಲ್ಲರಿಗೂ ಸಹಜವಾಗಿ ಸಿಗುವ ಬಾಲ್ಯ ಈಕೆಗೆ ಸಿಗಲಿಲ್ಲ. ಅಲ್ಲದೇ ದ್ರುಪದನೇ ಈಕೆಯ ತಂದೆಯೂ, ತಾಯಿಯೂ ಆಗಿ ಸಾಕಿದ್ದರಿಂದ ತಾಯಿ ಪ್ರೀತಿಯಿಂದಲೂ ಈಕೆ ವಂಚಿತೆ. ಅದಕ್ಕೆ ತನ್ನತ್ತೆ ಕುಂತಿಯನ್ನು ಆಕೆ ಅಷ್ಟು ಹಚ್ಚಿಕೊಂಡಿದ್ದು.


ಸ್ವಯಂವರದಲ್ಲಿ ಅರ್ಜುನ ಇವಳನ್ನು ಗೆದ್ದು ತಂದಾಗ ಕುಚೇಷ್ಟೆಗೆ ಅವರಾಡಿದ ಮಾತು ಸಮಸ್ಯೆಗೆ ಕಾರಣವಾಯ್ತು. "ಭಿಕ್ಷೆ ತಂದಿದ್ದೇವೆ" ಎಂಬ ಮಾತಿಗೆ ಕುಂತಿ "ಐವರೂ ಸಮನಾಗಿ ಹಂಚಿಕೊಳ್ಳಿ" ಎನ್ನುತ್ತಾಳೆ. 


ಇದು ತಿಳಿಯದೇ ಆದ ತಪ್ಪು. 


ಕುಂತಿಗೆ ಭಿಕ್ಷೆಯಲ್ಲಿ ಏನು ತಂದಿದ್ದಾರೆ ಎಂದು ತಿಳಿದಿರಲಿಲ್ಲ. ಏನೋ ತಿನಿಸು ದೊರೆತು ಅದನ್ನು ಅರ್ಜುನನೋ, ಭೀಮನೋ ಯಾರಿಗೂ ಕೊಡದೇ ತಿಂದರೆ ಉಳಿದವರಿಗೆ ತಿನ್ನಲು ಸಿಗದೇ ಅನ್ಯಾಯವಾಗುತ್ತದೆ ಎಂಬ ಆತಂಕವಷ್ಟೇ ಅವಳಿಗೆ ಇದ್ದದ್ದು. 


ಮೊದಲೇ ಭೀಮನಿಗೆ ತಿನ್ನಲು ಹೆಚ್ಚು ಬೇಕು. 


ಈಗ ಸಿಕ್ಕಿದ್ದಷ್ಟನ್ನೂ ಭೀಮನೊಬ್ಬನೇ ತಿಂದುಬಿಟ್ಟರೆ ಉಳಿದ ಮಕ್ಕಳಿಗೆ ಏನೂ ಸಿಗದಂತಾಗುತ್ತದೆ ಎಂಬ ಕಾರಣದಿಂದಲೇ ಭಿಕ್ಷೆಯಲ್ಲಿ ಏನು ಸಿಕ್ಕಿದೆ ಅಂತ ಕೇಳುವ ಮೊದಲೇ ಅವಳ ಮಾತೃ ಹೃದಯ ಈ ಮಾತನ್ನು ಹೇಳಿಸಿರುತ್ತದೆ.‌ ಕಷ್ಟವೇ ಬರಲಿ, ಸುಖವೇ ಬರಲಿ ಒಟ್ಟಿಗೆ ಅನುಭವಿಸಿ ಎಂಬುದು ಕುಂತಿ ಹೇಳಿದ ಮಾತಿನ ಅರ್ಥ. ಅದು ಅಪಾರ್ಥಕ್ಕೆ ಎಡೆಯಾಯ್ತು.


ಏಕೆಂದರೆ ಭಿಕ್ಷೆಗೆ ದೊರೆತದ್ದು ಹಣ್ಣಲ್ಲ... ಹೆಣ್ಣು!!


ಪಾಂಡವರು ಮಾತೃ ವಾಕ್ಯ ಪರಿಪಾಲಕರು. ತಾಯಿ ಮಾತನ್ನು ಮೀರಬಾರದೆಂದು ಹೇಳುತ್ತದೆ ಧರ್ಮ. ಹಾಗಾಗಿಯೇ ತಾಯಿ ಮತಿನಂತೆ ದ್ರೌಪದಿಯನ್ನು ಐವರೂ ವರಿಸುತ್ತಾರೆ. ಇದಕ್ಕೆ ವ್ಯಾಸರೂ, ನಾರದರೂ ಸಮರ್ಥನೆ ಕೊಡುತ್ತಾರೆ. ಇವೆಲ್ಲಾ ಮನೆಮಂದಿಯ ಪರಿಚಿತರ ವಿಷಯವಾಯ್ತು. ಮುಂದೆ ತುಂಬಿದ ರಾಜಸಭೆಯಲ್ಲಿ ಪಾಂಡವರು ಈ ಪ್ರಶ್ನೆಯನ್ನು ಎದುರಿಸಬೇಕಾಗುತ್ತದೆ.


ಜನರೆಲ್ಲ ಇದನ್ನೊಪ್ಪದೇ ತಲೆಗೊಂದು ಪ್ರಶ್ನೆ ಕೇಳುತ್ತಾರೆ. ಗಂಡಿಗೆ ಎಷ್ಟು ಹೆಂಡತಿಯರಿದ್ದರೂ ತೊಂದರೆಯಿಲ್ಲ, ಆದರೆ ಹೆಣ್ಣಿಗೆ ಮಾತ್ರ ಒಬ್ಬನೇ ಗಂಡ ಎಂಬಂತಹ ನಿಯಮವಿದ್ದ ಆ ಕಾಲದಲ್ಲಿ ದ್ರೌಪದಿ ಐವರನ್ನು ಮದುವೆಯಾದದ್ದು ಜನರಿ್ಗೆಗೆ ಅಸಭ್ಯವೆನಿಸುವ ವಿಚಾರವಾಗಿತ್ತು. ಆ ಕಾಲಘಟ್ಟದಲ್ಲಿ ನಿಂತು ನೋಡಿದರೆ ನಮಗೂ ಹಾಗೇ ಅನಿಸುತ್ತದೆ ಅಲ್ಲವೇ?


ಆಗ ಧರ್ಮರಾಯ ಅವರುಗಳಿಗೆ ಒಂದಕ್ಕಿಂತ ಹೆಚ್ಚು ಮದುವೆ ಆದವರಲ್ಲಿ ದ್ರೌಪದಿಯೇ ಮೊದಲನೆಯವಳಲ್ಲ ಎಂದು ಹಳೆಯ ಉದಾಹರಣೆಗಳ ಮೂಲಕ‌ ಮನದಟ್ಟು ಮಾಡಿಸುತ್ತಾನೆ.


ಇದಕ್ಕೂ ಮೊದಲೇ ಗೌತಮ ವಂಶದ ಜಟಿಲಾ ಎಂಬಾಕೆ ಏಳು ಪುರುಷರನ್ನು ಮದುವೆಯಾಗಿದ್ದಳು. ಯಯಾತಿಯ ಮಗಳು ಮಾಧವಿಗೆ ನಾಲ್ವರು ಪುತ್ರರು. ಆದರೆ ನಾಲ್ವರೂ ಪುತ್ರರ ತಂದೆಯರು ಬೇರೆಬೇರೆ. ಒಂದು ಮಗು ಆಗುವವರೆಗೆ ಒಬ್ಬ ಗಂಡನ ಜೊತೆ ಇರುವುದು ಆಗ ಸಮ್ಮತ ಎನ್ನಿಸಿತ್ತು.


ಹೆಣ್ಣಿಗೆ ತನ್ನ ಮಗುವಿನ ತಂದೆಯನ್ನು ಆರಿಸುವ ಹಕ್ಕು ಇತ್ತು. ಹಾಗಾಗಿಯೇ ದ್ರೌಪದಿ ತನ್ನ ಸ್ವಯಂವರದಲ್ಲಿ ಬಿಲ್ಲನ್ನೆತ್ತಲು ಬಂದ ಕರ್ಣನನ್ನು ಸೂತಪುತ್ರನೆಂದು ತಿರಸ್ಕರಿಸುತ್ತಾಳೆ.


ವಾರ್ಕ್ಷೀ ಎಂಬ ಮುನಿಪುತ್ರಿಯು ಹತ್ತು ಸೋದರರನ್ನು ಮದುವೆಯಾಗಿದ್ದಳು‌. ಅವರು ಭಾರ್ಗವ ಗೋತ್ರದ ಪ್ರಚೇತಸನ ಮಕ್ಕಳು.


ಇವೆಲ್ಲಾ ಯುಧಿಷ್ಠಿರನ ಸಮರ್ಥನೆಯಾದರೆ, ಇನ್ನೊಂದು ಕಡೆ ವ್ಯಾಸರೂ ಈ ಮದುವೆ ಅಂತಹಾ ಅಧರ್ಮವೇನಲ್ಲ ಎಂದು ಹೇಳಿದ್ದಾರೆ. ಪೂರ್ವದ ಐವರು ಇಂದ್ರರ ಅಂಶಗಳೇ ಪಾಂಡವರು ಎಂದೂ, ಆ ಐವರ ಸತಿಯರಾದ ಇಂದ್ರಾಣಿ, ಶಚೀ ಮೊದಲಾದವರ ಅಂಶಗಳು ಈ ದ್ರೌಪದಿಯಲ್ಲಿಏಕೀಭವಿಸಿವೆ ಎಂಬುದು ವ್ಯಾಸರ ಸ್ಪಷ್ಟನೆ.‌ 


ಅಲ್ಲದೇ ಪೂರ್ವಜನ್ಮದಲ್ಲಿ ಮುನಿಕುಮಾರಿಯೊಬ್ಬಳು ತನಗೆ ವಿವಾಹವಾಗದೇ ಈಶ್ವರನನ್ನು ಕುರಿತು ತಪಸ್ಸು ಮಾಡಿ "ಗಂಡನನ್ನು ಕೊಡು" ಎಂದು ಐದು ಬಾರಿ ಕೇಳಿದ ಪರಿಣಾಮವಿದು ಅಂತಲೂ ಹೇಳುತ್ತಾರೆ ವ್ಯಾಸರು.


ಕೃಷ್ಣನ ದೃಷ್ಟಿಯೂ ಅದೇ. 


ಯಾವುದು ಎಲ್ಲರಿಗೂ ಆನಂದ ಕೊಡಬಲ್ಲುದೋ, ಯಾವುದರಿಂದ ಯಾರಿಗೂ ಕೇಡಾಗುವುದಿಲ್ಲವೋ, ಯಾವುದನ್ನು ಮಾಡಿದ ಮೇಲೆ 'ಅಯ್ಯೋ ಹಾಗೆ ಮಾಡಬಾರದಿತ್ತು' ಎಂದು ಪಶ್ಚಾತ್ತಾಪ ಆಗುವುದಿಲ್ಲವೋ ಅದೇ "ಧರ್ಮ".


ಅಲ್ಲದೇ ಪಂಚ ಪಾಂಡವರನ್ನು ಒಂದೇ ಕಡೆ ಕಟ್ಟಿ ಹಾಕಲು ಇದು ಅವಶ್ಯಕವಾಗಿತ್ತು. ಹಾಗಾಗಿಯೇ ಆ ಕಾಲದಲ್ಲಿ ದ್ರೌಪದಿಯ ಮದುವೆ ಸಮಾಜದಲ್ಲಿ ಸಮ್ಮತವಾದುದಷ್ಟೇ ಅಲ್ಲದೇ ದ್ರೌಪದಿಯ ಪಂಚ ಮಹಾ ಪತಿವ್ರತೆಯರಲ್ಲಿ ಒಬ್ಬಳೆಂದು ಪರಿಗಣಿತಳಾದಳು.


(ಪ್ರೇರಣಾ ಪತ್ರಿಕೆ ಮೇ 2014)


***********
ಕೆ.ಎ.ಸೌಮ್ಯ
ಮೈಸೂರು

Popular posts from this blog

ಸೈರಂಧ್ರಿ ಎಂಬ ಅಗ್ನಿಕನ್ಯೆ

ಶಾಕುಂತಲೆ-ದುಶ್ಯಂತ

ಕುಂತಿ