ಮಂಡೋದರಿ
ಈ ಶಬ್ದ ಕೇಳಿದರೆ ಯಾವುದೋ ರಾಕ್ಷಸಿಯ ಹೆಸರು ಇರಬೇಕು ಅಂತನಿಸುತ್ತದೆ. ಅಲ್ಲದೇ ಆಕೆ ರಾವಣನ ಹೆಂಡತಿಯೂ ಆಗಿರುವುದರಿಂದ ಹೆಸರು ಕೇಳಿದ ಕೂಡಲೇ ಇವಳ್ಯಾರೋ ರಾಕ್ಷಸಿಯೇ ಅಂತ ನಿರ್ಧಾರಕ್ಕೆ ಬಂದುಬಿಡುತ್ತೇವೆ. ಆದರೆ ಈಕೆ ಗಂಧರ್ವ ಕನ್ಯೆ ಹೇಮೆಯ ಮಗಳು. ಅತ್ಯಂತ ಸುಂದರಿ.
'ಮಂಡೋದರಿ' ಎಂದರೆ ಸುಂದರವಾದ ಉದರವನ್ನು ಹೊಂದಿದವಳು ಅಂತ ಅರ್ಥ.
ಮದುವೆಗೂ ಮೊದಲು ಎಲ್ಲಾ ಹೆಣ್ಣುಮಕ್ಕಳೂ ಮಂಡೋದರಿಯರಾಗಿಯೇ ಇರುತ್ತಾರೆ. ಮದುವೆಯಾದ ನಂತರ ಅದೇನು ಮ್ಯಾಜಿಕ್ಕೋ ಏನೋ ಅವರ ಉದರ ಟೈರ್ ರೀತಿ ಊದಿ ಬಿಡುತ್ತದೆ. ಆಗ ಗಂಡಂದಿರಿಗೆ ತಮ್ಮ ತಮ್ಮ ಹೆಂಡತಿಯರಿಗಿಂತ ಬೇರೆ ಹೆಣ್ಣುಮಕ್ಕಳು ಸುಂದರವಾಗಿ ಕಾಣಲು ತೊಡಗುತ್ತಾರೆ.
ಆದರೆ ಅತ್ಯಂತ ಸುಂದರಿಯನ್ನು ಮದುವೆಯಾದ ರಾವಣನೂ ಸಹ ಬೇರೆ ಸುಂದರಿಯರನ್ನು ಬಯಸಿದನೆಂದರೆ ಹೆಣ್ಣನ್ನು ಬಯಸಲು ಕೇವಲ ಅವಳ ಸೌಂದರ್ಯ ಒಂದೇ ಕಾರಣವಲ್ಲ ಅಂತನಿಸುತ್ತದೆ.
ರಾವಣ ಹಲವಾರು ಹೆಣ್ಣುಗಳನ್ನು ಬಯಸಿ, ಅಪಹರಿಸಿರಬಹುದು. ಆದರೆ ಮಂಡೋದರಿ ಮಾತ್ರ ಇಂದಿಗೂ ಪತಿವ್ರತೆಯ ಸಾಲಿನಲ್ಲಿಯೇ ನಿಲ್ಲುತ್ತಾಳೆ. ಅದು ಅವಳ ವಿಧಿಯೋ ಅಥವಾ ಇದಲ್ಲದೇ ಬೇರೆ ಯಾವ ಅವಕಾಶವಿರದೇ ಆಕೆ ಪತಿಯನ್ನು ಪಾಲಿಸಿದಳೋ ಗೊತ್ತಿಲ್ಲ. ಗಂಡ ಏನು ಮಾಡಿದರೂ ಹೆಂಡತಿ ಆತನನ್ನು ಅನುಸರಿಸಬೇಕು. ಆಗವಳಿಗೆ ಪತಿವ್ರತೆಯ ಪಟ್ಟ ಸಿಗುತ್ತದೆ.
ಗಂಡ ಕಾಡಿಗೆ ಬಂದನೆಂದು ತಾನೂ ಕಾಡಿಗೆ ಬಂದ ಸೀತೆಗೆ ಪತಿವ್ರತಾ ಶಿರೋಮಣಿಯೆಂಬ ಹೆಸರು. ಅದೇ ಅತ್ತೆ-ಮಾವನ ಸೇವೆಗಾಗಿ ಉಳಿದುಕೊಂಡ ಊರ್ಮಿಳೆಗೆ ಈ ಪಟ್ಟವಿಲ್ಲ.
ಯಾಕೆ ಈ ತಾರತಮ್ಯ?
ಕೇಳೋಣವೆಂದರೆ ತೇತ್ರಾಯುಗ ಬಹಳ ಹಿಂದೆಯೇ ಮುಗಿದು ಹೋಗಿದೆ. ಪತಿವ್ರತೆ ಎಂಬುದು ಪತಿಯೆಡೆಗಿನ ಅವರ ಭಕ್ತಿಗಾಗಿ ನೀಡುವ ಹೆಸರು ಎನ್ನುವುದಕ್ಕಿಂತಲೂ ಯಾವುದೋ ಅನ್ಯಾಯ ಸರಿಪಡಿಸಲು ನೀಡುವ ಪದವಿಯಂತೆ ಕಾಣುತ್ತದೆ. ಒಂದು ರೀತಿ ಅತೃಪ್ತ ಶಾಸಕರಿಗೆ ಮಂತ್ರಿ ಸ್ಥಾನ ನೀಡಿದಂತೆ.
ಅದರಲ್ಲಿಯೂ ಗಂಡನಾದವನು ಸ್ವಂತ ಹೆಂಡತಿಯಿದ್ದರೂ ಪ್ರಪಂಚದ ಹೆಣ್ಣುಮಕ್ಕಳನ್ನೆಲ್ಲಾ ಬಯಸಿ, ಅವರು ಮದುವೆಯಾಗಿದ್ದರೂ ಸಹ ಬಿಡದೇ ಅಪಹರಿಸಿ ಹೊತ್ತು ತರುತ್ತಿದ್ದರೂ ಸಹಿಸಿಕೊಂಡ ನೋವಿಗೆ ಬದಲಾಗಿ ಮಂಡೋದರಿಗೆ ಈ ಪಟ್ಟ ಕೊಟ್ಟು ನೋವನ್ನು ಶಮನ ಮಾಡಿದರೆಂದು ಕಾಣುತ್ತದೆ.
ಮಂಡೋದರಿಯ ಸೌಂದರ್ಯವೇ ರಾವಣನನ್ನು ಆಕರ್ಷಿಸಿದ್ದು. ಅದಕ್ಕಾಗಿಯೇ ಆಕೆಯನ್ನು ಆತ ಮೆಚ್ಚಿ ಮದುವೆಯಾದ. ಅವರಿಗೆ ಮೂವರು ಪುತ್ರರೂ ಹುಟ್ಟಿದರು. ಆದರೆ ಮಕ್ಕಳು ಆತನಂತೆ ಆಗಲಿಲ್ಲ ಎನ್ನುವುದು ಒಂದು ಪುಣ್ಯ. ಮಕ್ಕಳಿಗೆ ತಾಯಿಯ ಸಂಸ್ಕಾರ ಬಂದಿರಬಹುದು ಅಥವಾ ದಿನನಿತ್ಯ ತಾಯಿ ಹಾಕುವ ಕಣ್ಣೀರು ಕಂಡ ಮಕ್ಕಳು ತಾವು ತಂದೆಯಂತೆ ಆಗಬಾರದು ಎಂಬ ನಿರ್ಧಾರ ತೆಗೆದುಕೊಂಡಿರಬಹುದು. ಒಟ್ಟಿನಲ್ಲಿ ಅವರು ತಂದೆಯಂತೆ ಆಗಲಿಲ್ಲ.
ಆದರೆ ಮಂಡೋದರಿಯ ನೋವಿಗೆ ಕೊನೆಯೆಲ್ಲಿ?
ತಾನು ಗಂಡನನ್ನು ಅದೆಷ್ಟು ಪ್ರೀತಿಸಿದರೂ, ಪೂಜಿಸಿದರೂ, ಅನುಸರಿಸಿದರೂ ಆತ ಬೇರೆ ಹೆಣ್ಣನ್ನು ಆಸೆಯಿಂದ ನೋಡುವುದನ್ನು ಕಂಡು ಆ ಹೆಣ್ಣು ಮನಸ್ಸು ಅದೆಷ್ಟು ಸಂಕಟ ಪಟ್ಟಿರಬೇಕು? ತನ್ನಲ್ಲೇನು ಕಡಿಮೆಯಾಗಿದೆ ಅಂತ ಆಕೆ ಅದೆಷ್ಟು ಕೊರಗಿರಬೇಕು? ಅದೆಷ್ಟು ಬಾರಿ ಆತ್ಮಹತ್ಯೆಯ ಯೋಚನೆ ಸುಳಿದಿರಬಹುದು? ಆದರೆ ಮಕ್ಕಳಿಗಾಗಿ ಆಕೆ ಮನಸ್ಸು ಗಟ್ಟಿ ಮಾಡಿಕೊಂಡು ಬದುಕಿರಬಹುದು.
ಆದರೆ ಸೀತೆಯ ಅಪಹರಣವಾದಾಗ ತಮ್ಮ ತಪ್ಪಿಲ್ಲದಿದ್ದರೂ ಮಕ್ಕಳು ತಂದೆಗಾಗಿ ರಾಮನೊಡನೆ ಯುದ್ಧ ಮಾಡಿ ಪ್ರಾಣ ಕಳೆದುಕೊಳ್ಳುತ್ತಿದ್ದಾಗ ಅವಳ ಹೃದಯ ಅದೆಷ್ಟು ವೇದನೆ ಪಟ್ಟಿರಬಹುದು? ಯಾರಿಗಾಗಿ ಅವಳು ಬದುಕಿದ್ದಳೋ ಅವರ ಸಾವನ್ನೇ ಕಾಣುವ ಅವಳ ದುಃಖದ ಬಗ್ಗೆ ಊಹಿಸಲು ಸಾಧ್ಯವೇ? ಮಾತೃ ಹೃದಯಕ್ಕೆ ಘಾಸಿಯಾದಾಗಲೂ ಆಕೆ ಗಂಡನ ಬಗ್ಗೆ ಒಂದು ಕೊಂಕು ಮಾತನ್ನೂ ಆಡದೇ ಸಂಯಮ ತೋರಿದಳೆಂದರೆ ಆಕೆಯ ಸಂಸ್ಕಾರ ಎಷ್ಟು ಉನ್ನತ ಮಟ್ಟದ್ದಿರಬಹುದು.
ಅದಕ್ಕಾಗಿಯೇ ಆಕೆಗೆ ವಿಶ್ವದಲ್ಲಿಯೇ ಸರ್ವಶ್ರೇಷ್ಠವಾದ ಪದವಿ ಕೊಟ್ಟು ಗೌರವಿಸಿರಬಹುದು. ಒಂದಂತೂ ಸ್ಪಷ್ಟ. ಅಂದ-ಚಂದದ ಹೆಣ್ಣುಮಕ್ಕಳ ಜೀವನ ನೋವಿನಿಂದ ತುಂಬಿರುತ್ತದೆ. ಬಹುಶಃ ಭೂಮಿಯ ಮೇಲಿನ ಜನ್ಮ ಈ ಕಾರಣಕ್ಕೇ ಇರಬೇಕು.... ನೋವು ಅನುಭವಿಸಲು!
***********************
-ಕೆ.ಎ.ಸೌಮ್ಯ
ಮೈಸೂರು
(ಓ ಮನಸೇ 1-15 Jan 2020)
