ನಳ ದಮಯಂತಿ
"ಪ್ರೇಮವೆಂದರೆ ಹಾಗೆ.. ಅದು ಇರುವುದೇ ಹೀಗೆ"
ಪ್ರೇಮ ಕಣ್ಣಿನಿಂದ ಹುಟ್ಟುತ್ತದೆ ಎನ್ನುತ್ತಾರೆ. ಆದರೆ ಪ್ರೇಮ ನಿಜಕ್ಕೂ ಹುಟ್ಟುವುದು ಹೃದಯದಿಂದ. ನಾವು ನೋಡಿಯೂ ಇರದ ವ್ಯಕ್ತಿಯ ಬಗ್ಗೆ ನಮಗೆ ನಮ್ಮ ಅಂತರಾಳದಲ್ಲೊಂದು ಒಲವು ಮೂಡುತ್ತದೆ. ಕಣ್ಣು ಕಾಣದಿದ್ದರೂ ಆ ಒಲವನ್ನು ಮನಸ್ಸು ಅರಿಯುತ್ತದೆ.
ದೈವಬಲದಿಂದ ಆ ವ್ಯಕ್ತಿ ಎದುರಾಗಿ ಜೀವನಸಂಗಾತಿಯೂ ಆಗುತ್ತಾರೆ. ಆದರೆ ಹಾಗೆ ಆಗುವ ಮೊದಲು ಎಷ್ಟೆಲ್ಲಾ ಕಠಿಣ ಪರೀಕ್ಷೆಗಳು ಎದುರಾಗುತ್ತವೆ. ಈ ಎಲ್ಲವನ್ನೂ ಯಶಸ್ವಿಯಾಗಿ ಗೆದ್ದವರು ನಿಜವಾದ ಪ್ರೇಮಿಗಳು ಎನ್ನಿಸಿಕೊಳ್ಳುತ್ತಾರೆ. ಮುಖ ನೋಡಿ ಹುಟ್ಟುವ ಪ್ರೀತಿಗಿಂತಲೂ ಮನಸ್ಸನ್ನು ಅರಿತ ಪ್ರೀತಿಯೇ ಶ್ರೇಷ್ಠ ಅಂತ ಇದರಿಂದ ಗೊತ್ತಾಗುತ್ತದೆ.
ವಿದರ್ಭ ರಾಜ್ಯದ ರಾಜಕುಮಾರಿಯಾದ ದಮಯಂತಿಗೆ ಅವಳ ಜೀವನದಲ್ಲಿ ಇಂತಹಾ ಅಗ್ನಿಪರೀಕ್ಷೆಗಳು ಎರಡು ಬಾರಿ ಬರುತ್ತವೆ. ಮೊದಲ ಬಾರಿಗೆ ಅವಳ ಸ್ವಯಂವರದ ಸಂದರ್ಭದಲ್ಲಿ ಇದು ಎದುರಾಗುತ್ತದೆ.
ಆಕೆ ರಾಜಕುಮಾರ ನಳನನ್ನು ಕಣ್ಣಾರೆ ಕಾಣದಿದ್ದರೂ ಸಹ ಅವರಿವರ ಬಾಯಿಯಿಂದ ಅವನ ಸಾಧನೆಗಳನ್ನು ಕೇಳಿಯೇ ಪ್ರೀತಿಸಿದ್ದಳು. ಮದುವೆಯಾದರೆ ಅವನನ್ನೇ ಎಂದುಕೊಂಡಿದ್ದಳು. ಸ್ವಯಂವರದಲ್ಲಿ ಆತನಿಗೇ ಮಾಲೆ ಹಾಕಬೇಕು ಎಂದುಕೊಂಡಿದ್ದಳು.
ಆದರೆ ಸ್ವಯಂವರದ ಸ್ಥಳದಲ್ಲಿ ಆಕೆ ಕಂಡದ್ದೇನು?
ನಳನ ರೂಪದ ಐವರು ಅವಳಿಗಾಗಿ ಕಾಯುತ್ತಿದ್ದರು. ಆಕೆ ಅಪರೂಪದ ಸೌಂದರ್ಯವತಿಯಾದುದರಿಂದ ದೇವತೆಗಳೂ ಆಕೆಯನ್ನು ಕಂಡರೆ ಮೋಹಗೊಳ್ಳುತ್ತಿದ್ದರು.
ಹಾಗಾಗಿ ಆ ಸ್ವಯಂವರಕ್ಕೆ ಇಂದ್ರ, ಅಗ್ನಿ, ವಾಯು ಮತ್ತು ಯಮರೂ ಬಂದಿದ್ದರು. ಆಕೆ ನಳನನ್ನು ವರಿಸುತ್ತಾಳೆಂಬ ವಿಷಯ ತಿಳಿದ ನಾಲ್ವರು ದೇವತೆಯರೂ ನಳನ ವೇಷವನ್ನೇ ತೊಟ್ಟು ಕುಳಿತಿದ್ದರು. ಅದನ್ನು ಕಂಡ ದಮಯಂತಿಗೆ ಈಗ ನಿಜವಾದ ನಳನನ್ನು ಹೇಗೆ ಕಂಡುಹಿಡಿಯುವುದು ಅಂತ ಗೊತ್ತಾಗದೇ ದಿಕ್ಕುತೋಚದಂತಾಗುತ್ತದೆ.
ಆದರೂ ಜಾಣತನದಿಂದ ಅವಳೊಂದು ಉಪಾಯ ಮಾಡುತ್ತಾಳೆ.
ಆ ಐವರನ್ನೂ ಸೂಕ್ಷ್ಮವಾಗಿ ಗಮನಿಸುತ್ತಾ ಬರುತ್ತಾಳೆ. ಆಗೊಂದು ವಿಷಯ ಗೊತ್ತಾಗುತ್ತದೆ. ಏನೆಂದರೆ ಐವರಲ್ಲಿ ನಾಲ್ವರಿಗೆ ನೆರಳಿರಲಿಲ್ಲ, ಕಾಲು ನೆಲದ ಮೇಲೆ ಊರಿರಲಿಲ್ಲ ಮತ್ತು ಅವರುಗಳು ಕಣ್ಣು ಮಿಟುಕಿಸುತ್ತಿರಲಿಲ್ಲ. ಹಾಗಾಗಿ ಈ ಗುಣಗಳೆಲ್ಲವೂ ಇರುವವನೇ ಮನುಷ್ಯನಾದ ನಳ ರಾಜಕುಮಾರ ಎಂದರಿತು ಅವನಿಗೆ ಮಾಲೆ ಹಾಕುತ್ತಾಳೆ. ಇದರಿಂದ ಖುಷಿಯಾದ ದೇವತೆಗಳು ಅವರಿಬ್ಬರನ್ನೂ ಹರಸಿ ನಳನಿಗೆ ವಾಯುವೇಗದಲ್ಲಿ ಸಂಚರಿಸುವ ಮತ್ತು ಬೆಂಕಿಯಿಲ್ಲದೇ ಅಡುಗೆ ಮಾಡುವ ವಿದ್ಯೆ ಕಲಿಸಿ ಹೋಗುತ್ತಾರೆ.
ನಂತರ ನಳ-ದಮಯಂತಿಯರು ಮದುವೆಯಾಗಿ ಸುಖವಾಗಿರುತ್ತಾರೆ. ಇವರದ್ದು ಯಶಸ್ವೀ ಪ್ರೇಮ ವಿವಾಹ ಎನಿಸಿಕೊಳ್ಳುತ್ತದೆ.
ಆದರೆ ದಮಯಂತಿಯ ಪ್ರೀತಿಗೆ ಮತ್ತೊಮ್ಮೆ ಅಗ್ನಿಪರೀಕ್ಷೆ ಎದುರಾಗುವ ಸಂದರ್ಭ ಬರುತ್ತದೆ.
ಜೂಜಿನಿಂದಾಗಿ ತನ್ನ ಸಕಲವನ್ನೂ ಕಳೆದುಕೊಂಡ ನಳ ಮಹಾರಾಜ ಕೊನೆಗೆ ಹೆಂಡತಿಯನ್ನೂ ತೊರೆದು ಕಾಡಿಗೆ ಹೋದವನು ಮಾಡದ ತಪ್ಪಿಗೆ ಹಾವಿನಿಂದ ಕಡಿಸಿಕೊಂಡು ವಿರೂಪಿಯಾಗುತ್ತಾನೆ.
ಇತ್ತ ದಮಯಂತಿಯ ತವರಿನವರು ನಳನನ್ನು ಎಷ್ಟು ಹುಡುಕಿದರೂ ಸಿಗುವುದಿಲ್ಲ. ಹೇಗೆ ಸಿಗುತ್ತಾನೆ? ಹಾವಿನ ಕಡಿತದಿಂದ ಅವನ ರೂಪ ವಿಕಾರವಾಗಿರುತ್ತದೆಯಲ್ಲ? ದಮಯಂತಿಯಾದರೆ ತನ್ನ ಹೃದಯದಿಂದ ನೋಡುವವಳು. ಬಾಹ್ಯರೂಪ ಹೇಗಿದ್ದರೂ ಆಕೆಯ ಮನಸ್ಸಿಗೆ ಅದು ನಳ ಎಂದು ಅರಿವಾಗುತ್ತಿತ್ತು.
ಆದರೆ ಈ ಪ್ರಪಂಚದಲ್ಲಿ ಬಾಹ್ಯರೂಪಕ್ಕೆ ಇರುವ ಬೆಲೆ ಮನಸ್ಸಿಗಿಲ್ಲ. ಹಾಗಾಗಿ ನಳ ಎದುರಾದರೂ ಅವನನ್ನು ಗುರುತಿಸದ ಸೈನಿಕರು ವಾಪಸ್ ಬರುತ್ತಾರೆ.
ತಾವು ಕಂಡುಹಿಡಿಯಲು ಸಾಧ್ಯವಾಗಲಿಲ್ಲ ವಾದ್ದರಿಂದ ಅವನನ್ನೇ ಇಲ್ಲಿಗೆ ಬರುವಂತೆ ಮಾಡಬೇಕೆಂದು ದಮಯಂತಿ ನಿರ್ಧರಿಸುತ್ತಾಳೆ.
ಅದಕ್ಕಾಗಿ ಮತ್ತೊಮ್ಮೆ ತನ್ನ ಸುಳ್ಳಿನ ಸ್ವಯಂವರವನ್ನು ಏರ್ಪಡಿಸುತ್ತಾಳೆ. ಸುದ್ದಿ ತಿಳಿದಾಕ್ಷಣ ನಳ ಬಂದೇ ಬರುತ್ತಾನೆಂದು ಅವಳಿಗೆ ಅರಿವಿರುತ್ತದೆ. ತನ್ನ ಪ್ರೀತಿಯ ಮೇಲೆ ಅಷ್ಟೊಂದು ನಂಬಿಕೆ ಆಕೆಯದು.
ದಮಯಂತಿಯನ್ನು ಅಪಾರವಾಗಿ ಪ್ರೀತಿಸುವ ನಳ ವಿಷಯ ತಿಳಿದು ವಾಯುವೇಗದಿಂದ ಅಲ್ಲಿಗೆ ಧಾವಿಸಿ ಬರುತ್ತಾನೆ. ಅವನಿಗಾಗಿಯೇ ಕಾಯುತ್ತಿದ್ದ ದಮಯಂತಿಗೆ ಅವನ ಬಾಹ್ಯರೂಪ ಹೇಗೇ ಇದ್ದರೂ ಅವನೇ ನಳ ಎಂದರಿವಾಗುತ್ತದೆ.
ನಾವು ಅತಿಯಾಗಿ ಪ್ರೀತಿಸುವ ವ್ಯಕ್ತಿಯ ಸಾಮೀಪ್ಯ-ಸಾನಿಧ್ಯಗಳು ನಮ್ಮ ಹೃದಯಗಳನ್ನು ಒಂದಾಗಿಸುತ್ತವೆ. ಕಣ್ಣು ಕಾಣದ್ದನ್ನು ಹೃದಯ ಅರಿಯುತ್ತದೆ.
ಅಮೂಲ್ಯವಾದ ಇಂತಹಾ ಪ್ರೀತಿಯನ್ನು ನಾವು ಕುರುಡು ಪ್ರೀತಿ ಎಂದು ಜರಿಯುತ್ತೇವೆ. ಆದರೆ ಕೇವಲ ಕಣ್ಣಿನಿಂದ ಅಳೆಯದ ಬದಲಿಗೆ ಹೃದಯದ ಅಂತರಾಳದಿಂದ ಮತ್ತೊಬ್ಬರ ಭಾವನೆಗಳನ್ನು ಅರ್ಥೈಸಿಕೊಳ್ಳುವ ಪ್ರೀತಿಗೆ ಬಾಹ್ಯಸೌಂದರ್ಯದ ಅವಶ್ಯಕತೆ ಇರುವುದಿಲ್ಲ.
ಅವಳಿಗೆ ಅವನು ನಳ ಎಂದು ಗೊತ್ತಾಯ್ತು.
ಆದರೆ ಅವಳು ಹಾಗೆ ಹೇಳಿದರೆ ನಂಬುವವರು ಯಾರು? ಅತಿಯಾದ ಪ್ರೀತಿಯಿಂದ ಗಂಡನ ಅಗಲುವಿಕೆ ತಾಳಲಾರದೇ ಅವಳಿಗೆ ಹುಚ್ಚು ಹಿಡಿದಿರಬೇಕು, ಅದಕ್ಕಾಗಿಯೇ ಈ ಕುರೂಪಿಯನ್ನು ನಳ ಎನ್ನುತ್ತಿದ್ದಾಳೆ ಅಂದುಕೊಳ್ಳಬಹುದು ಎಲ್ಲರೂ.
ಹಾಗಾಗಿ ಎಲ್ಲರಿಗೂ ತಾವಾಗಿಯೇ ಅವನು ನಳ ಎಂದು ಅರಿವಾಗಲಿ ಎಂದು ಸ್ವಯಂವರದಲ್ಲಿ ಬೆಂಕಿಯಿಲ್ಲದೇ ಅಡುಗೆ ಮಾಡುವ ಸ್ಪರ್ಧೆ ಇರಿಸುತ್ತಾಳೆ.
ಈಗ ನಳನಲ್ಲದೇ ಮತ್ಯಾರು ಗೆಲ್ಲಲು ಸಾಧ್ಯ?
ನಳನಿಗೂ ಸಹ ಇದು ತನಗಾಗಿಯೇ ಇಟ್ಟ ಪರೀಕ್ಷೆ ಎಂದು ಅರಿವಾಗುತ್ತದೆ. ಆತ ಆನಂದಭಾಷ್ಪ ಸುರಿಸುತ್ತಾ ಆಕೆಯ ಬಳಿ ಇಷ್ಟು ಕುರೂಪಿಯಾದ ತನ್ನನ್ನು ಹೇಗೆ ಗಂಡನೆಂದು ಸ್ವೀಕರಿಸುವೆ ಎಂದು ಕೇಳುತ್ತಾನೆ.
ದಮಯಂತಿಯು ಅದೇ ಪ್ರೇಮಭಾವದಿಂದ ನೋಡುತ್ತಾ "ನಿಮ್ಮ ಒಡನಾಟ, ಸಖ್ಯದ ಸವಿ ಉಂಡವಳಿಗೆ ನಿಮ್ಮ ಬಾಹ್ಯರೂಪ ಅಂದಿಗೂ ಕಂಡಿರಲಿಲ್ಲ ಇಂದಿಗೂ ಕಾಣುತ್ತಿಲ್ಲ, ನಿಮ್ಮ ಪ್ರೀತಿಯಲ್ಲದೇ ಮತ್ತೇನೂ ಬೇಡ" ಎಂದು ಆತನ ಕಾಲಿಗೆ ಬೀಳುತ್ತಾಳೆ.
ಪ್ರೀತಿಯಲ್ಲಿ ಗೆದ್ದವನಿಂದ ಆತನ ಕುರೂಪವೂ ಮಾಯವಾಗಿ ಮತ್ತೆ ಮೊದಲಿನಂತಾಗುತ್ತಾನೆ ನಳ.
ಮೊದಲನೇ ಸಲ ದೇವತೆಗಳನ್ನೇ ತಿರಸ್ಕರಿಸಿ ನಳನನ್ನು ವರಿಸುವ ದಮಯಂತಿ, ಎರಡನೇ ಬಾರಿಗೆ ಮನಸ್ಸು ಮಾಡಿದ್ದರೆ ಮತ್ತೊಬ್ಬನನ್ನು ವರಿಸಬಹುದಿತ್ತು. ಆದರೆ ಅಂತರಂಗಕ್ಕೆ ಬೆಲೆ ಕೊಡುವ ದಮಯಂತಿಯು ಕುರೂಪಿಯಾಗಿದ್ದರೂ ಸಹ ತನ್ನ ಪ್ರೀತಿಯನ್ನೇ ಆರಿಸಿಕೊಳ್ಳುತ್ತಾಳೆ. ವ್ಯಾವಹಾರಿಕ ಪ್ರಪಂಚದಲ್ಲಿ ದಮಯಂತಿಯ ಈ ಪ್ರೀತಿ ಒಂದು ಅಚ್ಚರಿಯಾಗಿಯೇ ಉಳಿಯುತ್ತದೆ.
**********
-ಕೆ.ಎ.ಸೌಮ್ಯ
ಮೈಸೂರು
