ಅಹಲ್ಯೆಗೆ ಯಾಕೋ ಇತ್ತೀಚೆಗೆ ತುಂಬಾ ಅನುಮಾನ ಕಾಡುತ್ತಿತ್ತು.
ಮಹರ್ಷಿಗಳು ತನ್ನನ್ನು ಮೊದಲ ಹಾಗೆ ನೋಡದೇ ಪರೀಕ್ಷಕ ದೃಷ್ಟಿಯಿಂದ ನೋಡುತ್ತಿದ್ದಾರೆಂದು. ಅವಳು ತನಗಿದ್ದ ಶಾಪ ಕಳೆದುಕೊಂಡು ವಿಮುಕ್ತಳಾದರೂ, ಲೋಕದೆದುರು ಕಳಂಕರಹಿತಳಾದರೂ ಗೌತಮರಿಗೆ ಇನ್ನೂ ತನ್ನ ಮೇಲಿನ ಸಂಶಯ ಹೋಗಿಲ್ಲವೇ? ಅದಕ್ಕೆ ಆಗಾಗ ಬೇಕಂತಲೇ ಕರೆದು ಪರೀಕ್ಷೆ ಮಾಡುತ್ತಿರಬಹುದೇ ಎಂದೆನಿಸುತ್ತಿತ್ತು.
ಕಲ್ಲಾಗಿದ್ದಾಗಲೇ ಎಷ್ಟೋ ಚೆನ್ನಾಗಿತ್ತು.
ಕಲ್ಲಾಗಿದ್ದ ಅಷ್ಟೂ ಸಮಯ ಕೇವಲ ಅವಳದ್ದಾಗಿತ್ತು. ಏನೋ ಯೋಚಿಸುತ್ತಾ ಸುತ್ತಲಿರುವ ಪ್ರಕೃತಿ ನೋಡುತ್ತಾ, ಖುಷಿ ಪಡುತ್ತಾ ತನ್ನೊಳಗೆ ತಾನೇ ಕಳೆದು ಹೋಗುತ್ತಿದ್ದಳು.
ನಂತರ ಶ್ರೀರಾಮನ ಪಾದಸ್ಪರ್ಶದಿಂದ ಮತ್ತೆ ಮಾನವಳಾದರೂ, ಮೈ-ಮನಸ್ಸುಗಳು ಇನ್ನೂ ಜಡದ ಗುಂಗಿನಲ್ಲಿಯೇ ಇದ್ದವು. ಅವುಗಳನ್ನು ಎಚ್ಚರಗೊಳಿಸುವುದು ಕಷ್ಟದ ಕೆಲಸವಾಗಿತ್ತು. ಅಂತಹಾ ಸಮಯದಲ್ಲಿ ಗೌತಮರು ಅವಳನ್ನು ಕರೆದರೆ ಇವರು ನಿಜವಾಗಿಯೂ ಮಹರ್ಷಿಗಳೋ ಅಥವಾ ಮಹರ್ಷಿಗಳ ರೂಪ ಧರಿಸಿರುವ ಇಂದ್ರನೋ ಅಂತ ಅವಳಿಗೆ ಗಾಬರಿಯಾಗುತ್ತಿತ್ತು.
ಇಂದ್ರನನ್ನು ಮಹರ್ಷಿಗಳೆಂದು ಭ್ರಮಿಸಿ ಮೋಸ ಹೋದೆನಲ್ಲ ಅಂತ ಅವಳ ಮೇಲೆ ಅವಳಿಗೇ ಕೋಪ ಬರುತ್ತಿತ್ತು. ಆದರೂ ಇದರಲ್ಲಿ ಅವಳ ತಪ್ಪೇನಿತ್ತು?
ನಿಜಕ್ಕೂ ಆ ಸಮಯದಲ್ಲಿ ಏನು ನಡೆಯಿತು ಎನ್ನುವುದೇ ತಿಳಿಯದಷ್ಟು ಅವಳ ಬುದ್ಧಿ ಮಂಕಾಗಿತ್ತು. ಆದರೆ ಒಂದಂತೂ ಸ್ಪಷ್ಟವಾಗಿತ್ತು. ತಾನು ಮಾಡಬಾರದ ಯಾವುದೋ ಮಹಾಪರಾಧವೊಂದನ್ನು ಮಾಡಿದ್ದೇನೆ ಅಂತ.
ಆದರೆ ಮರುಕ್ಷಣವೇ 'ತಾನು ಮಹಾನ್ ಪತಿವ್ರತೆಯಾಗಿರುವುದರಿಂದಲೇ ತಾನು ಮಾಡಿದ್ದು ತಪ್ಪೆನಿಸುತ್ತಿದೆಯೇ? ಅಂದರೆ ಪತಿವ್ರತೆಯ ಪಟ್ಟ ತಪ್ಪಿ ಹೋಗುತ್ತದೆಯೆಂದು ತನಗೆ ಭಯವಾಗುತ್ತಿದೆಯೇ? ಈ ಪಟ್ಟ ಇಲ್ಲದಿದ್ದರೆ ತಾನೇನು ಮಾಡಿದರೂ ಸರಿ ಎನ್ನಿಸುತ್ತಿತ್ತೇ?' ಅಂತಲೂ ಅನಿಸುತ್ತಿತ್ತು.
ಅಂದು ಅವಳು ನೋಡುತ್ತಲೇ ಇದ್ದಳು.
ಗೌತಮರು ಇಂದ್ರನಿಗೆ ಯಾವ ಶಾಪವನ್ನೂ ಕೊಡಲಿಲ್ಲ. ಗೌತಮರ ವೇಷ ಧರಿಸಿ ಬಂದು ತನಗೆ ಮೋಸ ಮಾಡಿದವನು ಅವನು. ಅವನನ್ನು ಪತಿಯೆಂದೇ ನಂಬಿದವಳು ತಾನು. ಮೋಸ ಮಾಡಿದವನಿಗೆ ಏನೂ ಶಿಕ್ಷೆಯಿಲ್ಲ. ನಂಬಿದವಳಿಗೆ ಮಾತ್ರ ಕಲ್ಲಾಗುವ ಶಾಪ. ಏಕೆ ಹೀಗೆ....?
ತಾನು ಇದರ ಬಗ್ಗೆ ಕೇಳಬಾರದೆಂದೇ ಗೌತಮರು ತನ್ನನ್ನು ಕಲ್ಲು ಮಾಡಿದರೆಂದು ಅವಳ ಅನಿಸಿಕೆ. ಇಲ್ಲಿಯೂ ಪುರುಷ ಪುರುಷರು ಒಂದಾದರು. ಅವರೆಂದಿಗೂ ಒಂದೇ ಎಂದು ಮತ್ತೊಮ್ಮೆ ತೋರಿಸಿಕೊಟ್ಟರು.
ಕೆಲವು ಕಾಲ ಕಳೆದ ಮೇಲೆ ಸ್ವತಃ ಅವಳಿಗೇ ತಾನು ಕಲ್ಲಾಗಿರುವುದೇ ಒಳ್ಳೆಯದಾಯ್ತು ಎನ್ನಿಸಲಿಕ್ಕೆ ಶುರುವಾಯ್ತು. ಯಾಕೆ ಹೀಗಾಯ್ತು ಅಂತ ತನ್ನೊಳಗೆ ತಾನೇ ಆತ್ಮವಿಮರ್ಶೆ ಮಾಡಿಕೊಳ್ಳಲು ಸಮಯ ಸಿಕ್ಕಿದಂತಾಯ್ತು. ಆ ಚಿಂತನೆಯಲ್ಲಿಯೇ ಹಗಲಿರುಳು ಮುಳುಗಿದ ಅವಳಿಗೆ ತಾನು ಮಾಡಿದ್ದು ಯಾವ ತಪ್ಪೂ ಅಲ್ಲವೆಂದು ಮನದಟ್ಟಾಯ್ತು.
ಏಕೆಂದರೆ ನಮಗೆ ಚಿಕ್ಕಂದಿನಿಂದಲೇ ನಾವು ಹುಟ್ಟಿರುವುದೇ ಪರರಿಗಾಗಿ, ಪತಿಯ ಸೇವೆಯೇ ಪರಮ ಗುರಿ ಎಂದು ಹೇಳಿಕೊಟ್ಟು ಬೆಳೆಸಿರುತ್ತಾರೆ. ಅದರಂತೆಯೇ ಪತಿಯ ಸೇವೆಯಲ್ಲಿ ಯಾವ ಚ್ಯುತಿಯೂ ಬರದಂತೆ ಅಂದಿನವರೆಗೂ ಆಕೆ ನಡೆದುಕೊಂಡಿದ್ದಳು.
ಅಂದೂ ಸಹ ಪತಿಯ ಸೇವೆ ಮಾಡುತ್ತಿದ್ದೇನೆಂದೇ ಭಾವಿಸಿದ್ದಳು. ಅದು ಪತಿಯಲ್ಲವೆಂದು ಅವಳಿಗೆ ಚೂರು ಅನುಮಾನ ಬಂದಿದ್ದರೂ ಅದನ್ನು ಮಾತಿನಲ್ಲಿ ವ್ಯಕ್ತಪಡಿಸಲಾಗಲೀ ಅಥವಾ ನಡೆಯಲ್ಲಿ ತೋರಿಸಲಾಗಲೀ ಸಾಧ್ಯವಿತ್ತೇ?
ಅಥವಾ ಅಕಸ್ಮಾತ್ ತಾನು ಇದು ಗೌತಮರಲ್ಲ ಎಂದುಕೊಂಡು ಪ್ರತಿಭಟಿಸಿ ನಂತರ ಅದು ಗೌತಮರೇ ಆಗಿದ್ದರೆ? ಆ ತಪ್ಪನ್ನು ಇವರು ಕ್ಷಮಿಸುತ್ತಿದ್ದರೇ?
ಯಾವ ಕಡೆಯಿಂದ ನೋಡಿದರೂ ತಪ್ಪು ತನ್ನದಲ್ಲ ಅಂತಲೇ ಅನ್ನಿಸುತ್ತಿತ್ತು. ಆದರೂ ಅವಳಿಗೆ ಸಹಸ್ರಾರು ವರ್ಷಗಳಷ್ಟು ಕಾಲ ಕಲ್ಲಾಗುವ ಶಿಕ್ಷೆ. ಈಗ ಮತ್ತೆ ಮನುಷ್ಯಳಾದರೂ ಹೆಜ್ಜೆ ಹೆಜ್ಜೆಗೂ ಪರೀಕ್ಷೆಯೆಂಬ ಹಿಂಸೆ..
ಸದಾ ಅನುಮಾನವೆಂಬ ನೋಟ ಅವಳನ್ನು ಇರಿಯುತ್ತಿರುವಾಗ ನೆಮ್ಮದಿಯಿಂದಿರಲು ಹೇಗೆ ಸಾಧ್ಯ? ಇದರ ಬದಲು ಕಲ್ಲಾಗಿದ್ದರೇ ಎಷ್ಟೋ ಚೆನ್ನಾಗಿತ್ತು. ಆಗ ಯಾರ ದೃಷ್ಟಿಯೂ ತನ್ನ ಮೇಲೆ ಬೀಳುತ್ತಿರಲಿಲ್ಲ. ಇನ್ನಷ್ಟು ವರ್ಷ ಕಳೆದ ಮೇಲೆ ಎಲ್ಲರೂ ತನ್ನನ್ನೂ, ತನ್ನ ಕಥೆಯನ್ನೂ ಮರೆತೇ ಬಿಡುತ್ತಿದ್ದರು ಎಂದುಕೊಳ್ಳುತ್ತಿದ್ದಳು.
ಆದರೆ ಶ್ರೀರಾಮ ಬಂದು ತನ್ನ ಪಾದಸ್ಪರ್ಶ ಮಾಡಿ ತನ್ನನ್ನು ಈಗ ಮಾತ್ರವಲ್ಲ.. ಯುಗಯುಗಾಂತರಗಳಲ್ಲಿಯೂ ಯಾರೂ ಮರೆಯಬಾರದು ಹಾಗೆ ಮಾಡಿಬಿಟ್ಟ. ಇಷ್ಟೆಲ್ಲಾ ಆಗಿ ಶ್ರೀರಾಮನೇ ಜೀವದಾನ ಮಾಡಿದ ಮೇಲೆ ಗೌತಮರು ಮಹಾನ್ ಪತಿವ್ರತೆ ಎಂಬ ಬಿರುದು ಕೊಟ್ಟರು.
ಈ ಬಿರುದನ್ನು ಅವರು ಮೊದಲೇ ಕೊಡಬಹುದಿತ್ತು, ಇಷ್ಟು ವರ್ಷ ಯಾಕೆ ಕಾಯಬೇಕಿತ್ತು, ತಮ್ಮ ಪತ್ನಿ ಪತಿವ್ರತೆಯೇ ಅಲ್ಲವೇ ಎಂದು ಹೇಳಲು ರಾಮನೇ ಬರಬೇಕಿತ್ತೇ?
ಇಷ್ಟಕ್ಕೂ ತಾನು ಮಾಡಿದ ಅಂತಹ ಪಾಪವಾದರೂ ಏನು? ಯಾರೊಬ್ಬರ ಸ್ವತ್ತನ್ನೂ ಕದಿಯಲಿಲ್ಲ. ಯಾರೊಬ್ಬರ ರಾಜ್ಯವನ್ನೂ ಕಿತ್ತುಕೊಳ್ಳಲಿಲ್ಲ. ಯಾರೊಬ್ಬರ ನಂಬಿಕೆಗೂ ದ್ರೋಹ ಮಾಡಲಿಲ್ಲ. ಪತಿಸೇವೆಯಲ್ಲಿಯೇ ಸುಖ ಕಂಡವಳು. ಅಂದು ಬಂದವನು ಇಂದ್ರನೇ ಆಗಿದ್ದರೂ ತಾನು ಮನಸ್ಸಿನಲ್ಲಿ ಧ್ಯಾನಿಸುತ್ತಿದ್ದುದು, ಭ್ರಮಿಸುತ್ತಿದ್ದುದು ಅದು ಗೌತಮರೆಂದು ತಾನೇ?
ಅಂದ ಮೇಲೆ ಅದು ಪಾಪ ಹೇಗಾಗುತ್ತದೆ?
ಒಂದಂತೂ ನಿಜ. ಅಂದು ತಾನು ಕಲ್ಲಾಗಿದ್ದೇ ಒಳ್ಳೆಯದಾಯ್ತು. ಅಕಸ್ಮಾತ್ ಹಾಗಾಗದೇ ಅಂದೇನಾದರೂ ಗೌತಮರು ಕ್ಷಮಿಸಿದಿದ್ದರೆ, ಅವರು ಕ್ಷಮಿಸಿದರಲ್ಲ ಅಂತ ಅವರಿಗೆ ಮತ್ತಷ್ಟು ವಿಧೇಯಳಾಗಿ ಪಾಪಪ್ರಜ್ಞೆಯಲ್ಲಿಯೇ ಕೊರಗುತ್ತಾ ಬದುಕಬೇಕಾಗಿತ್ತು.
ಎಷ್ಟು ಸಾವಿರ ವರ್ಷ ಕಾದರೂ ಪರವಾಗಿಲ್ಲ. ಅನ್ಯಾಯದ ವಿರುದ್ಧ ಧ್ವನಿಯೆತ್ತುವ, ನನ್ನ ಇಷ್ಟಾನಿಷ್ಟಗಳನ್ನು ಗಂಡನ ಮುಂದೆ ಹೇಳುವ ಧೈರ್ಯ ಬಂದಿದೆಯಲ್ಲ ಅಷ್ಟು ಸಾಕು. ಈ ಧೈರ್ಯವನ್ನು ಇಲ್ಲಿಗೇ ಮುರುಟಿಹೋಗಲು ಬಿಡಬಾರದು, ಯುಗಯುಗಾಂತರಗಳ ಎಲ್ಲಾ ಸ್ತ್ರೀಯರಿಗೂ ತಲುಪಿಸಬೇಕೆಂದು ದೃಢ ನಿಶ್ಚಯ ಮಾಡಿದಳು.
**********
ಓ ಮನಸೇಯಲ್ಲಿ ಪ್ರಕಟವಾಗಿದೆ (ಪ್ರತಿ ಸಿಕ್ಕಿಲ್ಲ)
ಕೆ.ಎ.ಸೌಮ್ಯ
ಮೈಸೂರು